ಯುರೇನಸ್ - 
ಸೌರವ್ಯೂಹ ಗ್ರಹಗಳ ಪೈಕಿ ಒಂದು. ಸೂರ್ಯನಿಂದ ಆರೋಹೀ ದೂರಕ್ರಮದಲ್ಲಿ ಏಳನೆಯದು. 18ನೆಯ ಶತಮಾನದಲ್ಲಿ ದೂರದರ್ಶಕದ ಸಹಾಯದಿಂದ ಆವಿಷ್ಕಾರಗೊಂಡ(1781) ಮೊತ್ತಮೊದಲ ಗ್ರಹ. ಅನಿಲದಿಂದ ಒಡಗೂಡಿದ, ಅನಿಲದೈತ್ಯ ಎಂದೆನಿಸುವ ನಾಲ್ಕು ಗ್ರಹಗಳ ಪೈಕಿ ಮೂರನೆಯ ದೊಡ್ಡ ಗಾತ್ರದ ಗ್ರಹ ಇದು. ಭೂಮಿಯ ತೂಕಕ್ಕಿಂತ 14 ಪಟ್ಟು ಹೆಚ್ಚು ತೂಕವುಳ್ಳದ್ದು.

	  ಗ್ರಹದ ವಿವರಗಳಿವು.	
	ಸೂರ್ಯನಿಂದ ಸರಾಸರಿ ದೂರ	...	2869.6 ಮಿಲಿಯನ್ ಕಿಮೀ.
	ಸೂರ್ಯನಿಂದ ಗರಿಷ್ಠ ದೂರ 	...	3004 ಮಿಲಿಯನ್ ಕಿಮೀ
	ಸೂರ್ಯನಿಂದ ಕನಿಷ್ಠ ದೂರ	...	2735 ಮಿಲಿಯನ್ ಕಿಮೀ.
	ನಾಕ್ಷತ್ರಿಕ ಅವಧಿ 	...	84.01 ವರ್ಷಗಳು (30684.9 ದಿವಸಗಳು)	
	ಸಂಯುತಿ ಅವಧಿ 	...	369.7 ದಿವಸಗಳು
	ಆವರ್ತನಾವಧಿ	...	16 ಗಂಟೆಗಳು 
	ಸರಾಸರಿ ಕಕ್ಷಾವೇಗ 	...	6.8 ಕಿಮೀ /ಸೆ
	ಕಕ್ಷಾ ಉತ್ಕೇಂದ್ರತೆ 	...	0.047
	ಗ್ರಹವ್ಯಾಸ 	...	51800 ಕಿಮೀ.
	ಭೂಮಿಯಿಂದ ತೋರ್ಕೆ ವ್ಯಾಸ 	...	3".7 (ಗರಿಷ್ಠ); 3".1 (ಕನಿಷ್ಠ)
	ವ್ಯುತ್ಕ್ರಮ ರಾಶಿ, ಸೂರ್ಯ	...	1:22800
	ಸಾಂದ್ರತೆ, ನೀರು 	...	1:1.7
	ರಾಶಿ, ಭೂಮಿ 	...	1:14.6
	ವಿಮೋಚನ ವೇಗ 	...	22.5 ಕಿಮೀ/ಸೆ
	ಮೇಲ್ಮೈ ಗುರುತ್ವ, ಭೂಮಿ	...	1:1.11
	ಮಾಧ್ಯ ಮೇಲ್ಮೈ ಉಷ್ಣತೆ 	...	-2100 ಅ
 	ಲಂಬಾಕ್ಷಸಂಕೋಚತ್ವ	...	0.01-0.03
	ಆಲ್ಬೆಡೋ	...	0.35
	ಗರಿಷ್ಠ ಕಾಂತಿಮಾನ 	...	+ 5.6
	ಯುರೇನಸ್ಸಿನಿಂದ ಸೂರ್ಯನ ಮಧ್ಯ ವ್ಯಾಸ	...	1' 41"
                        
ಸೂರ್ಯಸುತ್ತಲಿನ ಕಕ್ಷೆಯಲ್ಲಿ ಗ್ರಹ ಚಲಿಸುವಾಗ ಅದರ ಹಿನ್ನೆಲೆಯಲ್ಲಿ ಕಾಣಬರುವ ರಾಶಿಗಳು ಮತ್ತು ಆಯಾ ರಾಶಿಗಳ ಮುನ್ನೆಲೆಯಲ್ಲಿ ಗ್ರಹ ಇರುವ ಅವಧಿ:
ತುಲಾ 	1977-81	ಧನೂ	1980-95
ವೃಶ್ಚಿಕ	1982-84	ಮಕರ	1996-2000
ಓಫಿಯೂಕಸ್ 	1985-88
1989 ಜೂನ್ ತಿಂಗಳಿನಲ್ಲಿ ಯುರೇನಸ್ ಗ್ರಹದ ಗರಿಷ್ಠ ದಕ್ಷಿಣ ಘಂಟಾ ವೃತ್ತಾಂಶ -230.7 ಆಗಿತ್ತು. 1950 ಮಾರ್ಚ್ ತಿಂಗಳಲ್ಲಿ ಗರಿಷ್ಠು ಉತ್ತರ ಘಂಟಾ ವೃತ್ತಾಂಶ ಇತ್ತು. ಗ್ರಹ 1966 ಮೇ 20 ರಂದು ಪುರರವಿಬಿಂದುವನ್ನು ಹಾದು ಹೋಗಿತ್ತು. ಮಾತ್ರವಲ್ಲದೇ ಗ್ರಹ ಭೂಮಿಗೆ ಅತ್ಯಂತ ಸಮೀಪದಲ್ಲೂ (17.29 ಖಮಾ) ಇತ್ತು. ಭವಿಷ್ಯದಲ್ಲಿ ಪುರರವಿಬಿಂದುವನ್ನು ಹಾಯುವ ದಿನಾಂಕ 13 ಆಗಸ್ಟ್ 2050.
ಗ್ರಹದ ಅಕ್ಷ ಅದರ ಕಕ್ಷಾತಲಕ್ಕೆ 980 ಯಷ್ಟು ಮಾಲಿಕೊಂಡಿರುವುದರಿಂದ ಅದರ ಆವರ್ತನೆ ತಾತ್ವಿಕವಾಗಿಯೂ ವಕ್ರಗತಿಯದೇ ಆಗಿದೆ. ಗ್ರಹದ ಐದು ಉಪಗ್ರಹಗಳೂ ಗ್ರಹಾವರ್ತನೆಯ ಪರಿಯಲ್ಲೇ ಚಲಿಸುತ್ತವೆ. ಭೂಮಿಯಿಂದ ವೀಕ್ಷಿಸಿದಾಗ ಗ್ರಹದ ಮೇಲ್ಮೈ ಸಮಭಾಜಕ ಗ್ರಹದ ಸಮಾರ್ಧದಲ್ಲಿರುವಂತೆಯೂ (1923 ಮತ್ತು 1966 ರಲ್ಲಿ ಇದ್ದಂತೆ) ಬೇರೆ ಬೇರೆ ಸಮಯಗಳಲ್ಲಿ ಧುವಪ್ರದೇಶ ಕಾಣುವಂತೆಯೂ (1901 ಮತ್ತು 1985ರಲ್ಲಿ ಉತ್ತರ ಧ್ರುವ, 1946ಮತ್ತು 2030 ರಲ್ಲಿ ದಕ್ಷಿಣಧ್ರುವ) ಗೋಚರಿಸಿತ್ತು /ಗೋಚರಿಸುತ್ತದೆ.
ಆವಿಷ್ಕಾರ: ಆವಿಷ್ಕಾರ ಪೂರ್ವದ ಗ್ರಹವೀಕ್ಷಣ ದಾಖಲೆಯ ವಿವರಗಳಿವು. ಇಂಗ್ಲಿಷ್ ಖಗೋಳ ವಿe್ಞÁನಿ ಫ್ಲೆಮ್‍ಸ್ಟೀಡ್ (1646-1719) ಎಂಬವ ವೃಷಭರಾಶಿಯ ಮುನ್ನೆಲೆಯಲ್ಲಿ ಗ್ರಹ ಇದ್ದಾಗ ಅದನ್ನು ವೀಕ್ಷಿಸಿದ್ದಾಗಿ ತಿಳಿದು ಬಂದಿದೆ. ಆತ ಅದನ್ನು ನಕ್ಷತ್ರವೆಂದೇ (34 ಬಾರಿ) ಭಾವಿಸಿದ್ದ. ಹಿಂದಿನ 22 ವೀಕ್ಷಣೆಗಳು ಹೀಗಿವೆ. (ಆವರಣಗಳಲ್ಲಿ ವೀಕ್ಷಣೆಯ ಸಂಖ್ಯೆಯನ್ನು ಕೊಟ್ಟಿದೆ.):
ಫ್ಲೆಮ್‍ಸ್ಟೀಡ್ 1960, 1712, 1715 (4)

ಜೆ. ಬ್ರಾಸ್ಲೀ 1748 ಮತ್ತು 1750
ಪಿ. ಲೇ. ಮೋನಿಯರ್ 1750 (2) , 1764, 1768(2), 1769(6), 1771
ಟಿ. ಮೇಯರ್ 1756

ಗ್ರಹ ಚಲಿಸುತ್ತಿದ್ದುದರಿಂದ ಮೋನಿಯರ್‍ಗೆ ಅದನ್ನು ಗುರುತಿಸುವುದು ಸಾಧ್ಯವಾಗಲಿಲ್ಲ. 1768 ಡಿಸೆಂಬರ್ 27 ರಿಂದ 1769 ಜನವರಿ 23ರ ತನಕದ ನಾಲ್ಕು ವಾರಗಳ ಅವಧಿಯಲ್ಲಿ ಆತ ಗ್ರಹವನ್ನು ಎಂಟು ಸಲ ವೀಕ್ಷಿಸಿದ್ದ. ಅದು ನಕ್ಷತ್ರವೆಂದೇ ಅವನ ಭಾವನೆಯಾಗಿತ್ತು. 
ಜರ್ಮನಿಸಂಜಾತ ಬ್ರಿಟಿಷ್ ಖಗೋಳ ವಿe್ಞÁನಿ ಫ್ರೆಡರಿಕ್ ವಿಲಿಯಮ್ ಹರ್ಷಲ್ (1738-1822) ಯುರೇನಸ್ ಗ್ರಹವನ್ನು ಆವಿಷ್ಕಾರ ಮಾಡಿದ ಖ್ಯಾತಿಗೆ ಭಾಜನನಾದ. ಆತ ದೂರದರ್ಶಕವನ್ನು ನಿರ್ಮಿಸಿ ತನ್ಮೂಲಕ ಖಗೋಳಾಕಾಶದ ವೀಕ್ಷಣೆ ಮಾಡುತ್ತಿದ್ದ. ಹರ್ಷಲ್ 1781 ಮಾರ್ಚ್ 13 ರಂದು ಎಂದಿನಂತೆ ತನ್ನ 6 ಇಂಚು ವ್ಯಾಸದ 7 ಅಡಿ ನಾಭೀದೂರದ ದೂರದರ್ಶಕದ ಮೂಲಕ ಆಕಾಶದ ತಾರಾಗುಚ್ಚಗಳ ವೀಕ್ಷಣೆ ನಡೆಸಿದ್ದ. ಮಿಥುನ ರಾಶಿಯ ಬಳಿಯ ಒಂದು ನಕ್ಷತ್ರದತ್ತ ಅವನ ಗಮನ ಹರಿಯಿತು. ನೇತ್ರಮಸೂರದ ಪ್ರವರ್ಧನೆಯನ್ನು 227ರಿಂದ 460 ಕ್ಕೆ ಹೆಚ್ಚಿಸಿದಾಗ ಆ ನಕ್ಷತ್ರ ದುಂಡುಬಿಲ್ಲೆಯ ಆಕಾರದಲ್ಲಿದ್ದುದು ಗೋಚರಿಸಿತು. ಅಲ್ಲದೆ ಆ ನಕ್ಷತ್ರ ತನ್ನಿತರ ನೆರೆನಕ್ಷತ್ರಗಳಿಗೆ ಸಾಪೇಕ್ಷವಾಗಿ ಚಲಿಸುವುದೂ ಕಂಡುಬಂದಿತು. ಗ್ರಹವೇ ಅಥವಾ ಕ್ಷುದ್ರಗ್ರಹವೇ ಎಂಬ ಅನುಮಾನ ಅವನಿಗೆ. ಭೂಮಿಯನ್ನು ಬಿಟ್ಟರೆ, ಬಲು ಹಿಂದಿನಿಂದಲೂ e್ಞÁತಗ್ರಹಗಳ ಸಂಖ್ಯೆಯಲ್ಲಿ ಯಾವ ಬದಲಾವಣೆಯೂ ಆಗಿರಲಿಲ್ಲ. ಅದೊಂದು ಗ್ರಹವೇ ಎಂಬುದು ಹಠಾತ್ತನೆ ತಿಳಿಸಲು ಹರ್ಷೆಲ್ ದುಡುಕಲಿಲ್ಲವಾದರೂ ತಲೆಯಾಗಲಿ ಬಾಲವಾಗಲಿ ಇಲ್ಲದಿರುವ ಧೂಮಕೇತು ಅದು ಎಂಬ ವಿವರಣೆ ನೀಡಿದ. ಅಕೌಂಟ್ ಆಫ್ ಎ ಕಾಮೆಟೆ ಎಂಬ ಶೀರ್ಷಿಕೆಯನ್ನೇ ತನ್ನ ಪ್ರಬಂಧಕ್ಕೆ ನೀಡಿ ಅದನ್ನು ರಾಯಲ್ ಸಭೆಯ ವಿದ್ವತ್ಸಭೆಯಲ್ಲಿ 1781 ಏಪ್ರಿಲ್ 26ರಂದು ಮಂಡಿಸಿದ. ಫಿನ್ನಿಷ್ ಗಣಿತವಿದ ಜಿ. ಲೆಕ್ಸೆಲ್ ಎಂಬ ಮತ್ತೊಬ್ಬ ಖಗೋಳವಿe್ಞÁನಿ ಈ ಕಾಯದ ಕಕ್ಷಾಗಣನೆ ಮಾಡಿ ಅದರ ಕಕ್ಷೆ ಶನಿಗ್ರಹದ ಆಚೆಗೆ ಇರುವುದೆಂದೂ ಮೊದಲು ಪರಿಗಣಿಸಿದಂತೆ ಅದು ಧೂಮಕೇತು ಅಲ್ಲವೆಂದು ತಿಳಿಸಿದ. ಗ್ರಹಗಳು ಸೂರ್ಯನಿಂದ ಇರುವ ಸ್ಥಾನಗಳನ್ನು ಕುರಿತಂತೆ ಜರ್ಮನಿಯ ಯೊಹಾನ್ ಬೋಡ್ (1747-1826) ಎಂಬ ಖಗೋಳವಿe್ಞÁನಿಯ ನಿಯಮಾನುಸಾರವೇ ಈ ಕಾಯದ ಸ್ಥಾನ ಇರುವುದನ್ನು ಲೆಕ್ಸೆಲ್ ಲೆಕ್ಕಹಾಕಿದ. ಸೌರವ್ಯೂಹದ ಸೀಮಾಗ್ರಹವೆಂದು ಆತನಕವೂ ತಿಳಿಯಲಾಗಿದ್ದ ಶನಿಗ್ರಹವನ್ನು ಬಿಟ್ಟು, ಆ ಸೀಮೆಯ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೆ ಆಗಿನ ಕಾಲಕ್ಕೆ ಬೌದ್ಧಿಕ ಧೈರ್ಯ ಅನಿವಾರ್ಯವೇ ಆಯಿತು. ಹೊಸ ಆಕಾಶಕಾಯಗಳಿಗೆ ಆಗಿನ ಕಾಲದ ದೊರೆಗಳ ಗೌರವಾರ್ಥ ಆ ದೊರೆಗಳ ಹೆಸರನ್ನೇ ಇಡುವುದು ಸಂಪ್ರದಾಯವಾಗಿದ್ದ ಕಾರಣ ಹರ್ಷೆಲ್ ತನ್ನ ಹೊಸ ಕಾಯಕ್ಕೆ ಜಾರ್ಜಿಯಮ್ ಸೈಡಸ್ ಎಂದೇ ನಾಮಕರಣ ಮಾಡಿದ. ಹರ್ಷಲ್‍ನಿಗೆ ರಾಜಾಶ್ರಯವೂ ರಾಜಸ್ಥಾನದ ವೇತನವೂ ದೊರೆತವು. ಪೌರಾಣಿಕ ಸಂಪ್ರದಾಯಕ್ಕೆ ಕಟ್ಟುಬಿದ್ದಿದ್ದ ಕೆಲವರು ಇದನ್ನು ನೆಪ್ಚೂನ್ ಎಂದೂ ಮತ್ತೆ ಕೆಲವರು ಎಲ್ಲ ದೇವತೆಗಳಿಗಿಂತಲೂ ಬಲು ಪ್ರಾಚೀನದ್ದೂ ಶನಿಯ ತಂದೆಯೂ ಆದ ಯುರೇನಸ್‍ನ ಹೆಸರು ಇದಕ್ಕೆ ಇಡಬೇಕು ಎಂದೂ ವಾದಮಾಡಿದರು. ಕಾಯದ ಆವಿಷ್ಕಾರ ಮಾಡಿದವನ ಗೌರವಾರ್ಥ ಅದನ್ನು ಹರ್ಷೆಲ್ ಎಂದೇ ಕರೆಯಬೇಕೆಂದು ಲ್ಯಾಲೆಂಡ್ ಸೂಚಿಸಿದ. ಯುರೇನಸ್ ಎಂಬ ಹೆಸರನ್ನು ಜಾನ್ ಕೌಚ್ ಆಡಮ್ಸ್ ಎಂಬವ ಸೂಚಿಸಿದ. ಬಹಳ ಕಾಲದ ತನಕವೂ ಈ ಕಾಯಕ್ಕೆ ಹರ್ಷೆಲ್ ಎಂಬ ಹೆಸರೇ ಇತ್ತು. ಫ್ರಾನ್ಸಿನಲ್ಲೂ ಹಾಗೇ ಕರೆಯುತ್ತಿದ್ದರು. ಅಂತಿಮವಾಗಿ ಯುರೇನಸ್ ಎಂಬ ಹೆಸರೇ ಸ್ಥಿರವಾಯಿತು.

ಸರ್ ಜಾನ್ ರಾಸ್ ಎಂಬವ ಯುರೇನಸ್ ಗ್ರಹವನ್ನು ಚಂದ್ರಬಿಂಬ ಮರೆಮಾಡಿದ್ದನ್ನು ಮೊತ್ತಮೊದಲಿಗೆ (6-8-1824) ವೀಕ್ಷಿಸಿದ. ಜೆ. ಬುಫ್‍ಹ್ಯಾಮ್ ಎಂಬವ ಯುರೇನಸ್ ಗ್ರಹದ ಮೇಲ್ಮೈಯಲ್ಲಿ ಕೆಲವೊಂದು ಗುರುತುಗಳಿರುವುದನ್ನು ಮೊದಲಿಗೆ (25-1-1870) ವರದಿಗೈದ. ಆತ ಬಳಸಿದ ದೂರದರ್ಶಕದಲ್ಲಿ, ಗ್ರಹದ ಮೇಲ್ಮೈಯಲ್ಲಿ ಪ್ರಕಾಶ ಬೀಳುವ ಎರಡು ದುಂಡನೆಯ ಚುಕ್ಕಿಗಳು ಇರುವುದು ಪತ್ತೆಯಾಯಿತು. ಎ. ಸಿಚೀ ಎಂಬವ ಯುರೇನಸ್‍ನಿಂದ ಪಡೆಯಲಾದ ಬೆಳಕಿನ ರೋಹಿತದಲ್ಲಿ ಕಪ್ಪುರೇಖೆಗಳಿರುವುದನ್ನು ಮೊದಲಿಗೆ (1869) ಗುರುತಿಸಿದ. ಇಂಗ್ಲಿಷ್ ಖಗೋಳವಿe್ಞÁನಿ ಡಬ್ಲ್ಯು. ಹಗ್ಗೀಸ್ ಎಂಬವ ಮುಂದೆ (1871) ಈ ರೇಖೆಗಳ ಛಾಯಾಚಿತ್ರಗಳನ್ನು ಪಡೆದುಕೊಂಡ. ಗ್ರಹಚಲನೆಯ ವಿವರಗಳಿರುವ ಮೊದಲ ಉತ್ತಮ ಕೋಷ್ಟಕ ಅಮೆರಿಕದ ಸೈಮನ್ ನ್ಯೂಕೈಂಬ್ ಎಂಬವನಿಂದ ರಚಿತವಾಯಿತು. (1875). ಗ್ರಹದ ವಕ್ರಗತಿಯ ಆವರ್ತನೆಯ ಬಗ್ಗೆ ಫ್ರೆಂಚ್ ಖಗೋಳ ವಿe್ಞÁನಿ ಎಚ್. ಡೆಸ್‍ಲ್ಯಾಂಡರ್ಸ್ ಎಂಬಾತ ಮೊತ್ತಮೊದಲ (1902) ರೋಹಿತ ದರ್ಶಕೀಯ ಸಮರ್ಥನೆ ನೀಡಿದ. ಈ ಬಗ್ಗೆ ಪಿ. ಲೋವೆಲ್ ಮತ್ತು ವಿ. ಎಂ. ಸ್ಲಿಫರ್ ಎಂಬವರು ಅಂತಿಮ ಸಮರ್ಥನೆ ನೀಡಿದರು. ಗ್ರಹದ ವಾಯುಮಂಡಲದಲ್ಲಿ ಮೀಥೇನ್ ಅನಿಲ ಇರುವುದರ ಬಗ್ಗೆ ಮೊದಲು (1933) ಗುರುತಿಸಿದವ ಆರ್. ಮೆಕಿ. ಇದನ್ನು ಸೈದ್ಧಾಂತಿಕವಾಗಿ 1932ರಲ್ಲಿ  ಆರ್. ವಿಲ್ಡ್ಟ್ ಎಂಬವರು ಸೂಚಿಸಿದ್ದರು. ವಿ. ಎಂ. ಸ್ಲಿಫರ್ ಮತ್ತು ಎ. ಏಡಲ್ ಎಂಬುವರು 1924ರಲ್ಲಿ ಇದನ್ನು ಸಮರ್ಥಿಸಿದರು. 

ಗ್ರಹಲಕ್ಷಣಗಳನ್ನು ಕುರಿತಂತೆ ವಿಲ್ಡ್ಟ್ ಎಂಬವರು ಗ್ರಹದ ಒಳರಚನೆ (ತಿರುಳು) ಶಿಲಾಮಯವಾಗಿದೆಯೆಂದೂ ಹೊರಪದರ ಮಂಜಿನ ಪದರದಿಂದ ಆವೃತವಾಗಿದೆಯೆಂದೂ ಮಂಜಿನ ಪದರವನ್ನು ವಾಯುಮಂಡಲ ಆವರಿಸಿದೆಯೆಂದೂ ತಿಳಿಸಿದರು (1934). ಗ್ರಹ ಪ್ರಧಾನವಾಗಿ ಮೀಥೇನ್, ಅಮೋನಿಯ ಮತ್ತು ನೀರಿನಿಂದ ರಚಿತವಾಗಿದೆಯೆಂಬ ಅಭಿಪ್ರಾಯವನ್ನು ಡಬ್ಲ್ಯು. ಆರ್. ರ್ಯಾಮ್ಸೆ ಎಂಬುವರು ವ್ಯಕ್ತಪಡಿಸಿದರು. ಯುರೇನಸ್ ಗ್ರಹದ ಒಳಭಾಗ ಉಷ್ಣದಿಂದೊಡಗೂಡಿದೆಯೋ ಶೈತ್ಯದಿಂದೊಡಗೂಡಿದೆಯೋ ಎಂಬುದು ಇನ್ನೂ ಖಚಿತಪಟ್ಟಿಲ್ಲ. ಇತ್ತೀಚಿನ ಫಲಿತಾಂಶಗಳು ಅಲ್ಲಿ ಯಾವುದೇ ಉಷ್ಣಾಕರವಿಲ್ಲವೆಂಬುದನ್ನು ತಿಳಿಯಪಡಿಸುತ್ತದೆ. ಗ್ರಹದ ಒಂದು ಪ್ರತಿರೂಪದ ರೀತ್ಯ 16,000 ಕಿಮೀ ದಪ್ಪದ ತಿರುಳು, ಆ ತಿರುಳನ್ನು ಆವರಿಸಿರುವ 800 ಕಿಮೀ ದಪ್ಪದ ಮಂಜು ಇದೆ ಎಂಬುದು ವೇದ್ಯವಾಗುತ್ತದೆ. ಗ್ರಹದ ಉಳಿದ ಭಾಗಗಳಲ್ಲಿ ಅಣವಿಕ ಹೈಡ್ರೊಜನ್ ಇರುವುದು ಗೊತ್ತಾಗುತ್ತದೆ. ಗ್ರಹದ ವಾಯುಮಂಡಲ ಬಲು ನಿರ್ಮಲವಾಗಿದ್ದು ಸೂರ್ಯಕಿರಣ ನೇರವಾಗಿ ಗ್ರಹನೆಲವನ್ನು ಹೋಗುವುದು ಸಾಧ್ಯ ಇದೆ. ರೋಹಿತದರ್ಶಕೀಯ ಅಧ್ಯಯನಗಳಿಂದ ಮೀಥೇನ್ ಇರುವುದು ಸ್ಥಿರಪಟ್ಟಿದೆ. ಗ್ರಹದ ಕೇಂದ್ರಭಾಗ ಶಿಲಾಲೋಹದ ತಿರುಳಿನಿಂದಾಗಿದೆ. ಈ ಭಾಗದ ಉಷ್ಣತೆ 70000 ಸೆಲ್ಸಿಯಸ್ ಎಂದು ಅಂದಾಜು ಮಾಡಲಾಗಿದೆ. 

ಬಲೂನಿಯಲ್ಲಿ ದೂರದರ್ಶಕವನ್ನು ಇಟ್ಟು, 24 ಕಿಮೀ. ಎತ್ತರದಿಂದ ನಡೆಸಿದ (1970) ಗ್ರಹವೀಕ್ಷಣೆಗಳಿಂದ (ಸ್ಟ್ರಾಟೊಸ್ಕೋಪ್ 11) ಗ್ರಹದ ಮೇಲೆ ಯಾವುದೇ ಗುರುತುಗಳಿರುವುದೂ ಕಂಡುಬರುವುದಿಲ್ಲ; ಈ ಪರೀಕ್ಷೆಗಳಿಂದ ಪ್ರಿನ್‍ಸ್ಟನ್ ವಿಶ್ವವಿದ್ಯಾಲಯದ ಡೇನಿಯಲ್‍ಸನ್, ಟೊಮಾಸ್ಕೊ ಮತ್ತು ಸ್ಯಾವೇಜ್ ಎಂಬವರು ಗ್ರಹದ ವ್ಯಾಸ 51800 ಕಿಮೀ ಎಂದು ಲೆಕ್ಕಹಾಕಿದ್ದಾರೆ. ಅಮೆರಿಕದ ಮೌಂಟ್ಲೆಮ್ಮಾನ್ ವೀಕ್ಷಣಾಲಯದ ಜೇನ್‍ಸಿಕ್ ಎಂಬವರು ಗ್ರಹವ್ಯಾಸ 55000 ಕಿಮೀ ಎಂಬು ಲೆಕ್ಕಹಾಕಿದ್ದಾರೆ (1977).

ಗ್ರಹದ ಮೇಲೆ ಬೀಳುವ ಸೂರ್ಯನ ಬೆಳಕು ಭೂಮಿಯ ಮೇಲೆ ಬೀಳುವ ಬೆಳದಿಂಗಳಿನ 1068-1334 ಮಡಿಯಷ್ಟು ಶಕ್ತಿಯುತವಾಗಿರುತ್ತದೆ. ಗ್ರಹನೆಲದಿಂದ ನೋಡಿದಾಗ ಶನಿಗ್ರಹ ಸಾಕಷ್ಟು ಪ್ರಕಾಶದಿಂದ ಕಂಗೊಳಿಸುತ್ತದೆ. ಗ್ರಹ ವಿಯುತಿ ಸ್ಥಾನದಲ್ಲಿದ್ದಾಗ ನೆಪ್ಚೂನ್ ಬರಿಯ ಕಣ್ಣಿಗೆ ಕಾಣುವಷ್ಟು ಪ್ರಕಾಶದಿಂದ ಕೂಡಿರುತ್ತದೆ. ಯುರೇನಸ್ ಆಕಾಶದಲ್ಲಿ ಗುರುಗ್ರಹವಾದರೋ ಸೂರ್ಯನಿಗೆ ತೀರ ಸಮೀಪದಲ್ಲಿರುವಂತೆ ಕಾಣಿಸುವುದು. 

ಉಪಗ್ರಹಗಳು : ವಾಯೇಜರ್-2 ಗ್ರಹಶೋಧನ ನೌಕೆ ನಡೆಸಿದ ಹಾರಾಟದಿಂದ ಯುರೇನಸ್ ಗ್ರಹದ, ಸಾಧಾರಣ ಗಾತ್ರದ e್ಞÁತ ಐದು ಉಪಗ್ರಹಗಳ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿವೆ.

ಹೆಸರು	ಆವಿಷ್ಕರ್ತೃ	ಆವಿಷ್ಕಾರ	ಗ್ರಹದಿಂದ ಸರಾಸರಿ ದೂರ (ಕಿಮೀ)

ಮಿರಾಂಡ	ಕೈಪರ್	 1948	      130.5
ಏರಿಯಲ್	ಲ್ಯಾಸೆಲ್	 1851	      191.8
ಆಂಬ್ರಿಯಲ್	ಲ್ಯಾಸೆಲ್	 1851	      267.2
	ಟೈಟಾನಿಕ್	ಹರ್ಷೆಲ್	 1787	      483.4
	ಓಬೆರಾನ್	ಹರ್ಷೆಲ್	 1787	      586.3

 ಈ ಐದು ಉಪಗ್ರಹಗಳ ಪೈಕಿ ಕೊನೆಯದಾದ ಮಿರಾಂಡವನ್ನು ಟೆಕ್ಸಾಸಿನಲ್ಲಿಯ ಮ್ಯಾಕ್ ಡೊನಾಲ್ಡ್ ವೀಕ್ಷಣಾಲಯದಲ್ಲಿ 82 ಇಂಚಿನ ಪ್ರತಿಫಲನಕಾರಿ ದೂರದರ್ಶಕವನ್ನು ಬಳಸಿ, ಛಾಯಾಚಿತ್ರೀಕರಣ ವಿಧಾನದಿಂದ ಆವಿಷ್ಕರಿಸಲಾಯಿತು. ಮೊದಲ ನಾಲ್ಕು ಉಪಗ್ರಹಗಳಿಗೆ ಹೆಸರುಗಳನ್ನು ಇತ್ತವರು (1852) ವಿಲಿಯಮ್ ಹರ್ಷೆಲ್ಲನ ಮಗ, ಇಂಗ್ಲಿಷ್ ಖಗೋಳವಿe್ಞÁನಿ ಜಾನ್ ಫ್ರೆಡರಿಕ್ ಹರ್ಷೆಲ್ (1792-1871).

ಇತರ ನಾಲ್ಕು ಉಪಗ್ರಹಗಳನ್ನು ಪತ್ತೆ ಮಾಡಿರುವರೆಂದು ವಿಲಿಯಮ್ ಹರ್ಷೆಲ್ ಪ್ರಕಟಿಸಿದ್ದರಾದರೂ ಅವು ಸ್ಥಿರಪಡಲಿಲ್ಲ. ಡಬ್ಲು. ಎಚ್. ಪಿಕರಿಂಗ್ (1858-1938) ಎಂಬ ಖಗೋಳ ವಿe್ಞÁನಿ 1894, 1897 ಮತ್ತು 1899ರಲ್ಲಿ ಇತರ ಉಪಗ್ರಹಗಳಾಗಿ ಪ್ರಯತ್ನಿಸಿದನಾದರೂ ಸಫಲನಾಗಲಿಲ್ಲ. ಈ ಐದು ಉಪಗ್ರಹಗಳ ಪೈಕಿ ಅತ್ಯಂತ ದೊಡ್ಡವೆಂದರೆ ಟೈಟಾನಿಯ ಮತ್ತು ಓಬೆರಾನ್. ಇವು ಹೆಚ್ಚು ಕಡಿಮೆ ಒಂದೇ ಗಾತ್ರದವು (ವ್ಯಾಸ 1550ಕಿಮೀ). ಏರಿಯಲ್ ಮತ್ತು ಆಂಬ್ರಿಯಲ್ ಕೂಡ ಸರಿಸುಮಾರು ಒಂದೇ ಗಾತ್ರದವಾಗಿವೆ. (ವ್ಯಾಸ 1160ಕಿಮೀ). ಮಿರಾಂಡ ಉಪಗ್ರಹದ ವ್ಯಾಸ ಕೇವಲ 472ಕಿಮೀ. ಗ್ರಹಸಾಮೀಪ್ಯದ ಹಾರಾಟ ನಡೆಸಿದ ವಾಯೇಜರ್-2 ನೌಕೆ ಗ್ರಹಕ್ಕೆ ಇನ್ನೂ 10 ಚಿಕ್ಕ ಚಿಕ್ಕ ಉಪಗ್ರಹಗಳು ಇರುವುದನ್ನು ಪತ್ತೆ ಮಾಡಿದೆ.
ಗ್ರಹದ ಬಳೆಗಳು : 1977ರ ಮಾರ್ಚ್ 10 ರಂದು, ಎಂದಿನಂತೆ ಖಗೋಳ ವಿe್ಞÁನಿಗಳು ಯುರೇನಸ್ ಗ್ರಹವನ್ನು ವೀಕ್ಷಿಸಿದಾಗ ಒಂದು ವಿಚಿತ್ರ ಘಟನೆ (ತಾರಾಗ್ರಹಣ) ಜರುಗುತ್ತಿರುವುದನ್ನು ಕಂಡರು. ಮಂದಬೆಳಕಿನ ನಕ್ಷತ್ರವೊಂದನ್ನು ಗ್ರಹ ಅಡ್ಡಹಾಯುವ ಸನ್ನಿವೇಶ ಅದು. ಗ್ರಹ ಮತ್ತು ನಕ್ಷತ್ರದ ನಡುವಿನ ಅಂತರ ಕಡಿಮೆಯಾದಂತೆಲ್ಲ ನಕ್ಷತ್ರ ಐದು ಸಲ ಮಿಡಿದಂತೆ ತೋರಿತು. ಅನಂತರ ಅದು ಗ್ರಹದಿಂದ ಮರೆಯಾಯಿತು. ಪುನ: ನಕ್ಷತ್ರ ಕಾಣಿಸಿಕೊಂಡಾಗ ಮತ್ತೆ ಐದು ಸಲ ಮಿಡಿದದ್ದು ಕಂಡುಬಂದಿತು. ಸತತ ವೀಕ್ಷಣೆಯ ಫಲಿತಾಂಶ ಗ್ರಹದ ಸುತ್ತಲೂ ಬಳೆಗಳಿರುವ ವಿಚಾರವನ್ನು ಸ್ಪಷ್ಟಪಡಿಸಿದವು. ಗ್ರಹ ನಕ್ಷತ್ರವನ್ನು ಸಮೀಸಿದಂತೆಲ್ಲ ಅದರ ಪ್ರತಿಯೊಂದು ಬಳೆಯೂ ನಕ್ಷತ್ರವನ್ನು ಮರೆಮಾಡಿದ್ದು ಸ್ಥಿರಪಟ್ಟಿತು. ಒಟ್ಟಾರೆ ಹನ್ನೊಂದು ಬಳೆಗಳು (ಇವೆಲ್ಲ ಕಪ್ಪು ಬಣ್ಣದ, ತೆಳ್ಳೆನೆಯ ಹಾಗೂ ಕಿರಿದಾಗಿರುವಂಥವು) ಇರುವುದು ಸ್ಪಷ್ಟವಾಯಿತು.

ಯುರೇನಸ್ ಗ್ರಹದಿಂದ ನಕ್ಷತ್ರಗ್ರಹಣ ಬಗ್ಗೆ ವೀಕ್ಷಣೆ ನಡೆಸಿ ಲೆಕ್ಕಾಚಾರ ಮಾಡುವ ಬಗ್ಗೆ ರಾಯಲ್ ಗ್ರೀನ್‍ವಿಚ್ ವೀಕ್ಷಣಾಲಯದ ಗೋಡನ್ ಟೇಲರ್ ಎಂಬುವರು ಭೂಮಿಯ ದಕ್ಷಿಣಗೋಳಾರ್ಧದ ಕೆಲವೊಂದು ಪ್ರದೇಶಗಳಲ್ಲಿ ಮಾತ್ರ ಈ ವೀಕ್ಷಣೆ ಸಾಧ್ಯವಾಗುವುದೆಂದು ತಿಳಿಸಿದರು. ಅಮೆರಿಕದ ನಾಸಾ ಸಂಸ್ಥೆ ಸೇರಿದ ವಿಮಾನವನ್ನು ಬಳಸಿ ಕಾರ್ನೆಲ್ ವಿಶ್ವವಿದ್ಯಾಲಯದ ಜೇಮ್ಸ್ ಎಲ್. ಎಲಿಯೆಟ್ ಎಂಬವರು ದಕ್ಷಿಣ ಹಿಂದೂಸಾಗರದ ಮೇಲೆ ಹಾರಾಟ ನಡೆಸಿ ನಕ್ಷತ್ರದ ಬೆಳಕಿನಲ್ಲಿ ಆಗುವ ಕ್ಷೀಣತೆಯನ್ನು ವೀಕ್ಷಿಸಿದರು. ಈ ಘಟನೆಯ ವೀಕ್ಷಣೆಯನ್ನು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‍ನ ಕುಪ್ಪುಸ್ವಾಮಿ ಮತ್ತು ಭಟ್ಟಾಚಾರ್ಯ ಎಂಬವರು ಕಾವಲೂರಿನ ವೀಕ್ಷಣಾಲಯದಲ್ಲಿ ನಡೆಸಿದ್ದರು. ವಿಮಾನದಲ್ಲಿ ಒಯ್ದು ದೂರದರ್ಶಕದ ಮೂಲಕವೂ ಭಾರತದ ಕಾವಲೂರಿನ ವೀಕ್ಷಣಾಲಯದಲ್ಲಿಯ ದೂರದರ್ಶಕದ ಮೂಲಕವೂ ನಡೆಸಿದ ವೀಕ್ಷಣೆಗಳಿಂದ ಮೊದಮೊದಲು ಭಾವಿಸಿದ್ದರೆಂದರೆ ಯುರೇನಸ್ ಗ್ರಹಕ್ಕೆ ಹೊಸದೊಂದು ಉಪಗ್ರಹ ಇರಬೇಕು ಎಂಬ ವಿಚಾರ. ವೀಕ್ಷಣೆ, ಛಾಯಾಚಿತ್ರವಿಧಾನಗಳಿಂದ ಮಾಪನೆ ಮುಂತಾದವುಗಳಿಂದ ಗ್ರಹದ ಸುತ್ತ ಬಳೆಗಳು ಇರುವುದು ಸ್ಥಿರಪಟ್ಟಿತು. ಇದೇ ತೆರನವೀಕ್ಷಣೆಗಳು ಪೆರ್ತ್ ಮತ್ತು ಕೇಪ್‍ಟೌನ್‍ಗಳಿಂದಲೂ ನಡೆದಿತ್ತು.

ಮಾತೃಗ್ರಹ ಮತ್ತು ಬಳೆಗಳ ನಡುವಿನ ದೂರಗಳು ಹೀಗಿವೆ.
ಬಳೆ (ಹೆಸರು)	ಸರಾಸರಿ ದೂರ (103 ಕಿಮೀ)
1986 U 2 ಖ	      38
   6	      42
   5	      42
   4	      43	
ಆಲ್ಫ	      45
ಬೀಟಾ	      46
ಈಟ	      47
ಗ್ಯಾಮಾ	      48
ಡೆಲ್ಟ	      48
1986 U 1 ಖ	          50
ಎಪ್‍ಸೈಲಾನ್ 	      51

ಶನಿಗ್ರಹದ ಬಳೆಗಳನ್ನು ಹೋಲುವ ಈ ಬಳೆಗಳ ನಡುವೆ ತೆರಪಿದೆ. ಶನಿಗ್ರಹದ ಬಳೆಗಳೆಂತೆಯೇ ಯುರೇನಸ್ ಗ್ರಹದ ಬಳೆಗಳ ವ್ಯವಸ್ಥೆ ರೋಷೆ ಪರಿಮಿತಿಯಲ್ಲಿ ಇದೆ ಎಂಬುದು ತಿಳಿದುಬಂದಿದೆ. ಬಳೆಗಳ ಪೈಕಿ ಅತ್ಯಂತ ಮಹತ್ತ್ವದ್ದಾದ ಎಪ್‍ಸೈಲಾನ್ ಬಳೆ ಸುಮಾರು 160 ಕಿಮೀ ಅಗಲವಿರುವ ಖಂಡಗಳನ್ನು ಹೊಂದಿದೆ ಎಂಬುದು ಗೊತ್ತಾಗುತ್ತದೆ. 1986ರಲ್ಲಿ ಗ್ರಹ ಸಮೀಪದ ಹಾರಾಟ ನಡೆಸಿದ ಗ್ರಹಶೋಧನ ನೌಕೆ ವಾಯೇಜರ್-2 ಗ್ರಹದ ಬಳೆಗಳು ಮತ್ತು ಉಪಗ್ರಹಗಳ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಿದೆ. 

ಯುರೇನಸ್ ಗ್ರಹವನ್ನು ಮಿಲಿಯಮ್ ಹರ್ಷಲ್ ಆವಿಷ್ಕಾರ ಮಾಡಿದಾಗಿನಿಂದ (1781) ಇಲ್ಲಿಯ ತನಕ (1998) ಅದು ಸುಮಾರು 2 1/2 ಯಷ್ಟಕ್ಕೂ ಹೆಚ್ಚು ಸಲ ಸೂರ್ಯನನ್ನು ಪ್ರದಕ್ಷಿಣೆ ಹಾಕಿದೆ. ಮೂರನೆಯ ಪ್ರದಕ್ಷಿಣೆ ಮುಗಿಯುವ ವೇಳೆಗೆ (2033) ಅದು ಹಿಂದೆ (1781,1865,1949) ಇದ್ದಂತೆಯೇ ಮಿಥುನದಲ್ಲೇ ಗೋಚರಿಸುತ್ತದೆ.
(ಆರ್.ಆರ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ